ಪೆಟೆನ್‍ಕಾಫರ್, ಮ್ಯಾಕ್ಸ್ ಜೋಸೆಫ್ ಫಾನ್ 
1818-1901.  ಜರ್ಮನ್ ವೈದ್ಯಕೀಯ ರಸಾಯನವಿಜ್ಞಾನಿ.  ಜನನ 3-12-1818.   ಮರಣ 10-2-1901.  ಬವೇರಿಯದ ಲಿಕ್ಟೈನ್ ಹೈಮ್ ಎಂಬಲ್ಲಿ ಜನಿಸಿದ ಪೆಟೆನ್‍ಕಾಫರ್ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಪದವೀಧರನಾದ.  ರಸಾಯನವಿಜ್ಞಾನ ಮತ್ತು ಖನಿಜವಿಜ್ಞಾನಗಳ ಬಗೆಗೆ ಈತನಿಗೆ ವಿಶೇಷ ಆಸಕ್ತಿ.  ವಿದ್ಯಾರ್ಥಿಯಾಗಿದ್ದಾಗಲೇ ಗೌರೀಪಾಷಾಣದ (ಆರ್ಸೆನಿಕ್) ರಸಾಯನ ವೃತ್ತಾಂತದ ಬಗೆಗೂ ಇದನ್ನು ಸುರಮಾದಿಂದ (ಆ್ಯಂಟಿಮನಿ) ಬೇರ್ಪಡಿಸುವುದರ ಬಗೆಗೂ ಪ್ರಯೋಗ ಮಾಡಿದ್ದ.  ಮೂತ್ರದಲ್ಲಿ ಹಿಪ್ಪೂರಿಕ್ ಆಮ್ಲವಿರುವುದನ್ನು ಪತ್ತೆ ಹಚ್ಚಿದ; ಪಿತ್ತಲವಣಗಳ ಪ್ರಮಾಣವನ್ನು ಶೋಧಿಸುವ ಪರೀಕ್ಷಾ ವಿಧಾನವನ್ನು ರೂಪಿಸಿದ.  ಫಾನ್ ಲೈಬಿಗ್ ಜೊತೆಯಲ್ಲಿ ಕ್ರಿಯಾಟಿನಿನನ್ನು ಕಂಡುಹಿಡಿದ.

ವೈದ್ಯಕೀಯದಲ್ಲಿ ಉದ್ಯೋಗ ದೊರಕದ ಕಾರಣ ಪೆಟೆನ್‍ಕಾಫರ್ ಸರ್ಕಾರದ ಟಂಕ ಸಾಲೆಯಲ್ಲಿ ಲೋಹಶಾಸ್ತ್ರಜ್ಞನಾಗಿ ಕಾರ್ಯಾರಂಭಿಸಿದ.  ನಾಣ್ಯದಲ್ಲಿ ಬಂಗಾರ ಮತ್ತು ಬೆಳ್ಳಿಯ ಪ್ರಮಾಣವನ್ನು ನಿರ್ಧರಿಸುವ ವಿಧಾನವನ್ನು ರೂಪಿಸಿದ.  1947ರಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯ ವೈದ್ಯಕೀಯ ರಸಾಯನವಿಜ್ಞಾನ ವಿಭಾಗವನ್ನು ಆರಂಭಿಸಿದಾಗ ಅದರ ಪ್ರಾಧ್ಯಾಪಕನಾಗಿ ನಿಯಮಿಸಲ್ಪಟ್ಟ.  ಅಲ್ಲಿ ತನ್ನ ವಿದ್ಯಾರ್ಥಿ ಕಾರ್ಲ್ ಫಾನ್‍ವೊಯಿಟ್ ಜೊತೆ ಕೆಲಸಮಾಡಿ ಉಸಿರಾಟದ ಉಪಕರಣವನ್ನು ರೂಪಿಸಿದ.  ವಿಶ್ರಾಂತಸ್ಥಿತಿಯಲ್ಲಿ ದೇಹಕ್ಕೆ ಬೇಕಾಗುವ ಶರ್ಕರಪಿಷ್ಟ ಮತ್ತು ಕೊಬ್ಬಿನ ಅಂತೆಯೇ ವಾಯು ಹಾಗೂ ನೀರಿನಲ್ಲಿರುವ ಇಂಗಾಲ ಡೈಆಕ್ಸೈಡಿನ ಪ್ರಮಾಣಗಳನ್ನು ನಿರ್ಧರಿಸಿದ.  ಮುಂದೆ ಅವನ ಅಸಕ್ತಿ ಸಾರ್ವಜನಿಕ ಆರೋಗ್ಯದತ್ತ ಹರಿಯಿತು.  ಇದಕ್ಕೆ ಅಂಗಕ್ರಿಯಾಶಾಸ್ತ್ರ, ಅಂಗಕ್ರಿಯಾರಸಾಯನ ಶಾಸ್ತ್ರ ಮತ್ತು ಸಾಂಕ್ರಾಮಿಕಶಾಸ್ತ್ರ ಅಡಿಪಾಯವಾಗಿರುವುದು ವ್ಯಕ್ತವಾಯಿತು.

ಪೆಟೆನ್‍ಕಾಫರನ ಸತತ ಪ್ರಯತ್ನದಿಂದಾಗಿ ಬವೇರಿಯನ್ ಸರ್ಕಾರ 1865ರಲ್ಲಿ ಜನಾರೋಗ್ಯ ವಿಭಾಗವನ್ನು ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಿತು.  1879ರ ವೇಳೆಗೆ ಅದು ಆರೋಗ್ಯ ವಿಚಾರಗಳ ಸಂಶೋಧನೆ, ಬೋಧನೆ ಮತ್ತು ಪ್ರಯೋಗಗಳ ಕೇಂದ್ರ ಸಂಸ್ಥೆಯಾಗಿ ರೂಪುಗೊಂಡಿತು. ಅಲ್ಲಿ ಆರೋಗ್ಯದ ಬಗೆಗೆ ಪೆಟನ್‍ಕಾಫರ್ ನೀಡುತ್ತಿದ್ದ ಉಪನ್ಯಾಸಗಳು ಆತನ ಆಸಕ್ತಿಯ ವಿಸ್ತಾರವನ್ನು ಸೂಚಿಸುತ್ತವೆ.  ಪರಿಶುದ್ಧ ಆಹಾರ, ನೀರು, ವಾಯು, ನೈರ್ಮಲ್ಯ ವಿಧಾನಗಳು, ಕೊಳಚೆ ನಿರ್ಮೂಲನ, ನಿರ್ಮಲ ಪರಿಸರ, ವಿಷಾರಿವಸ್ತುಗಳು, ವೈದ್ಯಕೀಯ ಅಂಕೆಸಂಖ್ಯೆ ಶಾಸ್ತ್ರ ಮುಂತಾದವುಗಳ ಮೇಲೆ ಮಹತ್ತ್ವದ ಉಪನ್ಯಾಸಗಳನ್ನು ನೀಡಿ ಜನಜಾಗೃತಿಯನ್ನು ಉಂಟುಮಾಡಿದ.  ತನ್ನ ಪ್ರಯೋಗಗಳಿಂದ ಅವು ಜೀವನಕ್ಕೆ ಪೋಷಕವೆಂಬುದನ್ನು ತೋರಿಸಿದ.  ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯದಿಂದ ಇರಬಯಸುತ್ತಾನೆ.  ಆರೋಗ್ಯವಿಲ್ಲದ ಜೀವನ ಯಾತನಾಮಯ. ಆರೋಗ್ಯ ಮತ್ತು ಅನಾರೋಗ್ಯಗಳ ನಡುವೆ ಗೆರೆ ಎಳೆದು ಬೇರ್ಪಡಿಸುವುದು ಬಲು ಜಟಿಲ. ಯಾರೂ ಸಂಪೂರ್ಣವಾಗಿ ಆರೋಗ್ಯದಿಂದಾಗಲಿ ಅನಾರೋಗ್ಯದಿಂದಾಗಲಿ ಇರುವುದಿಲ್ಲ.  ನಮ್ಮ ಸಾಧನೆಯೆಲ್ಲವೂ ನಮ್ಮ ಕಾರ್ಯ ಸಾಮಥ್ರ್ಯ ಮತ್ತು ಆರೋಗ್ಯವನ್ನು ಅವಲಂಬಿಸಿದೆ.  ಪ್ರತಿಯೊಬ್ಬನೂ ಸ್ವಂತಾರೋಗ್ಯದಿಂದ ಮಾತ್ರವಲ್ಲ ಸಾರ್ವಜನಿಕ ಆರೋಗ್ಯದಿಂದ ಕೂಡ ಪ್ರಯೋಜನ ಪಡೆಯುತ್ತಾನೆ ಎಂದು ಪೆಟೆನ್‍ಕಾಫರ್ ಸಾರಿದ.

ಈತ ಜೀವವಿಜ್ಞಾನ (1865) ಮತ್ತು ಆರೋಗ್ಯ (1883) ಇವುಗಳ ಬಗೆಗಿನ ವೈದ್ಯಕೀಯ ಪತ್ರಿಕೆಗಳ ಸಂಪಾದಕನಾಗಿದ್ದ.  ಪೆಟೆನ್‍ಕಾಫರ್ ದಕ್ಷ ಆಡಳಿತಗಾರ.  ಆರೋಗ್ಯಶಾಸ್ತ್ರದಲ್ಲಿ ಅಂಕೆ ಸಂಖ್ಯೆಗಳ ಮಹತ್ತ್ವವನ್ನು ತೋರಿಸಿದ. ಆರೋಗ್ಯ ರಕ್ಷಣೆಯ ವಿಧಾನಗಳ ಬಗ್ಗೆ ಜನರಲ್ಲಿ ತಿಳಿವಳಿಕೆಯನ್ನು ಹೆಚ್ಚಿಸಲು ಅವರ ಸಹಕಾರ ಅಗತ್ಯವೆಂದು ತಿಳಿದಿದ್ದ. ಮ್ಯೂನಿಕ್ಕಿನಲ್ಲಿ ಕೊಳಚೆಯನ್ನು ದೂರ ಕೊಂಡೊಯ್ಯುವ ವಿಧಾನವನ್ನು ರೂಪಿಸಿದ.  ಇದರ ಫಲವಾಗಿ ಅಲ್ಲಿ ವಿಷಮಜ್ವರ ದೂರವಾಯಿತು.  ಕಾಲರಾಕ್ಕೆ ಜೀವಾಣು ಕಾರಣವೆಂಬ ಕಾಕ್‍ನ ಪ್ರಯೋಗವನ್ನು ಪೆಟೆನ್‍ಕಾಫರ್ ಒಪ್ಪಲಿಲ್ಲ.  ನೆಲದಲ್ಲಿ ಸೇರ್ಪಡೆ ಹೊಂದಿದ ಕಶ್ಮಲ ಮತ್ತು ವಿಷಾರಿ ವಸ್ತುಗಳು ಪರಿಸರವನ್ನು ಮಲಿನಗೊಳಿಸಿ ಜನರನ್ನು ಕಾಲರಾಕ್ಕೆ ಈಡುಮಾಡುತ್ತವೆಂದು ತಿಳಿದಿದ್ದ.

ವೈಯಕ್ತಿಕ ಸಾಮಥ್ರ್ಯದಿಂದ ಪೆಟೆನ್‍ಕಾಫರ್ ಮೇಲಕ್ಕೆ ಬಂದಾತ.  ಈತನ ಸಾಧನೆಗಳನ್ನು ಗುರುತಿಸಿದ ಜರ್ಮನ್ ಸರ್ಕಾರ 1896ರಲ್ಲಿ ಎಕ್ಸಲೆನ್ಸಿ (ಘನತೆವೆತ್ತ) ಬಿರುದನ್ನು ನೀಡಿತು.  ಮರುವರ್ಷ ಬ್ರಿಟಿಷ್ ಸಾರ್ವಜನಿಕ ಆರೋಗ್ಯ ಸಂಸ್ಥೆ ಪೆಟನ್‍ಕಾಫರನಿಗೆ ಹರ್ಬೆಸ್ ಸುವರ್ಣ ಪ್ರಶಸ್ತಿಯನ್ನು ಪ್ರದಾನಿಸಿತು.  ಮ್ಯೂನಿಕ್ ನಗರಸಭೆ ಆರೋಗ್ಯ ವಿಷಯಗಳ ಸಂಶೋಧನೆಗಾಗಿ ಪೆಟೆನ್‍ಕಾಫರ್ ಪ್ರತಿಷ್ಠಾನವನ್ನು ಸ್ಥಾಪಿಸಿತು.  ಈತ ಬಂದೂಕಿನ ಗುಂಡಿಗೆ ಆಹುತಿಯಾಗಿ ಅಸು ನೀಗಿದ್ದೊಂದು ವಿಪರ್ಯಾಸ.
(ವಿ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ